ಕಪ್ಪಂಗಿಯವರು : ಒಂದನೆಯ ಮಹಾಯುದ್ಧದ ಅನಂತರದ ಕಾಲದಲ್ಲಿ ಇಟಲಿಯಲ್ಲಿ ಉದ್ಭವಿಸಿದ್ದ ಅನಾಯಕತ್ವದ ಪರಿಸ್ಥಿತಿಯಲ್ಲಿ ಪ್ರಬಲನಾಗುತ್ತಿದ್ದ ಬೆನಿಟೊ ಮುಸೊಲೀನಿ ಸಂಘಟಿಸಿದ ಜನತಾ ಸೈನ್ಯ (ಬ್ಲ್ಯಾಕ್ ಶರ್ಟ್ಸ್). ನಿವೃತ್ತ ಸೈನಿಕರೂ ಅಧಿಕಾರಿಗಳೂ ವಿಶ್ವವಿದ್ಯಾನಿಲಯದ ಅಧ್ಯಾಪಕರೂ ವಿದ್ಯಾರ್ಥಿಗಳೂ ಕೃಷಿಕರೂ ಕಾರ್ಮಿಕರೂ ಇದ್ದ ಶಿಸ್ತಿನ ಸೇನೆಯ ಸದಸ್ಯರು ಕಪ್ಪನೆಯ ಸಮವಸ್ತ್ರ ಧರಿಸುತ್ತಿದ್ದುದರಿಂದ ಅವರಿಗೆ ಈ ಹೆಸರು ಬಂತು. ಧೈರ್ಯ ಕಷ್ಟಸಹಿಷ್ಣುತೆಗಳಿಗೆ ಕಪ್ಪು ಅಂಗಿ ಸಂಕೇತವೆಂದು ಪರಿಗಣಿಸಲಾಗಿತ್ತು. ವ್ಯಕ್ತಿಗಿಂತ ರಾಷ್ಟ್ರ ಮುಖ್ಯ, ರಾಷ್ಟ್ರೋನ್ನತಿಗಾಗಿ ವ್ಯಕ್ತಿಗಳು ಶ್ರಮಿಸಬೇಕು, ಹೋರಾಟದಿಂದ ಅದನ್ನು ಸಾಧಿಸಬೇಕು ಎಂಬುದೇ ಈ ಸಂಘಟನೆಯ ನೀತಿಯಾಗಿತ್ತು. ಕಪ್ಪಂಗಿಯವರು ಕಮ್ಯೂನಿಸಂ ಮತ್ತು ಪ್ರಜಾಪ್ರಭುತ್ವಗಳ ವಿರೋಧಿಗಳಾಗಿದ್ದರು. (ಪಿ.ಬಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ